ಕ್ಲಾರ್ಕ್, ಜಾನ್ ಬೇಟ್ಸ್	
1847-1938. ಅಮೆರಿಕದ ಒಬ್ಬ ಪ್ರಮುಖ ಸೃಜನಶೀಲ ಅರ್ಥಶಾಸ್ತ್ರಜ್ಞ, ಸೀಮಾಂತುಪಯುಕ್ತತಾ-ಸೀಮಾಂತ ಉತ್ಪಾದಕಾ ಸಿದ್ಧಾಂತದ ವಿಶಿಷ್ಟರೂಪುರೇಷೆಯೊಂದನ್ನು ತೋರಿಸಿಕೊಟ್ಟ. ಸಂಪೂರ್ಣ ಸ್ಪರ್ಧಾತ್ಮಕ ಸಮತೋಲದಲ್ಲಿ ಕಾಲ್ಪನಿಕ `ಸ್ಥಿರ ಸ್ಥಿತಿ' ಯ ಮಾದರಿಯನ್ನು ರಚಿಸಿದ. ಇದನ್ನನುಸರಿಸಿ, ಊಹಾತ್ಮಕ ಬದಲಾವಣೆಗಳ ಸಾಮಾನ್ಯ ಪರಿಣಾಮಗಳನ್ನು ವಿಶ್ಲೇಷಿಸಿದ.

ಕ್ಲಾರ್ಕ್ ನ್ಯೂ ಇಂಗ್ಲೆಂಡಿನ ಪ್ಯೂರಿಟನ್ ವಂಶಸ್ಥ. ತಂದೆ ರೋಡ್ ಐಲೆಂಡಿನ ಪ್ರಾವಿಡೆನ್ಸ್‍ನಲ್ಲಿ ಚಿಲ್ಲರೆ ವ್ಯಾಪಾರಿಯಾಗಿದ್ದ. ಅನಂತರ ಅವನು ಕಾರ್ಲಿಸ್ ಎಂಜಿನ್ ವಕ್ರ್ಸ್ ಎಂಬ ಉದ್ಯಮ ಸಂಸ್ಥೆಯ ಸಲಹೆಗಾರನಾಗಿದ್ದ. ಕೊನೆಗೆ ಆರೋಗ್ಯ ದೃಷ್ಟಿಯಿಂದ ಮಿನ್ನೆಸೋಟದಲ್ಲಿ ನೆಲೆಸಿ, ಅಲ್ಲಿ ನೇಗಿಲು ವ್ಯಾಪಾರದಲ್ಲಿ ನಿರತನಾದ. ಕ್ಲಾರ್ಕ್‍ನ ವಿದ್ಯಾಭ್ಯಾಸ ಆಮ್‍ಅಸ್ರ್ಟ್ ಕಾಲೇಜಿನಲ್ಲಿ ನಡೆಯಿತು. ತಂದೆಯ ಅನಾರೋಗ್ಯದಿಂದಾಗಿ ಎರಡು ಬಾರಿ ಅವನು ವಿದ್ಯಾಭ್ಯಾಸವನ್ನು ನಿಲ್ಲಿಸಿ ವ್ಯಾಪಾರ ನಿರ್ವಹಿಸಬೇಕಾಗಿ ಬಂದಿತ್ತು. ತಂದೆ ಮರಣಹೊಂದಿದಾಗ ಆತ ವ್ಯಾಪಾರ ಸಂಸ್ಥೆಯನ್ನು ವಿಕ್ರಯಿಸಿದ. 1872ರಲ್ಲಿ ಕ್ಲಾರ್ಕ್‍ನಿಗೆ ಪದವಿ ಪ್ರಾಪ್ತವಾಗುವ ವೇಳೆಗೆ ಅವನು ತನ್ನ ಜೊತೆಗಾರ ವಿದ್ಯಾರ್ಥಿಗಳಿಗಿಂತ ಹೆಚ್ಚು ಮಾಗಿದ್ದ, ಅನುಭವಿಯಾಗಿದ್ದ.
ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕೆಂಬುದು ಕ್ಲಾರ್ಕ್‍ನ ಇಚ್ಛೆಯಾಗಿತ್ತು. ಆದರೆ ಅವನು ಅರ್ಥಶಾಸ್ತ್ರ ವ್ಯಾಸಂಗ ಮುಂದುವರಿಸಬೇಕೆಂದು ಆತನ ಪ್ರಾಧ್ಯಾಪಕ ಸಲಹೆ ನೀಡಿದ. ಯೂರೋಪಿನಲ್ಲಿ, ಮುಖ್ಯವಾಗಿ ಹೈಡಲ್‍ಬರ್ಗ್ ಮತ್ತು ಜûುರಿಕ್‍ಗಳಲ್ಲಿ ಮೂರು ವರ್ಷಕಾಲ ಕ್ಲಾರ್ಕ್‍ನ ಅಧ್ಯಯನ ಸಾಗಿತು. ಆಗ ಅವನ ಮುಖ್ಯ ಪ್ರಾಧ್ಯಾಪಕನಾಗಿದ್ದವನು ಕಾರ್ಲ್ ಕ್ನೀಸ್. ಜರ್ಮನ್ ಇತಿಹಾಸ ಪಂಥ ಕ್ಲಾರ್ಕ್‍ನ ಮೇಲೆ ಪ್ರಭಾವ ಬೀರಿತು. ಆತನ ಸಾಮಾಜಿಕ-ನೈತಿಕ ದೃಷ್ಟಿ ರೂಪಿತವಾದ್ದು ಅದರಿಂದಾಗಿ. ಬ್ರಿಟಿಷ್ ಕ್ರಿಶ್ಚನ್ ಸಮಾಜವಾದದಲ್ಲೂ ಅವನು ಆಸಕ್ತಿ ತಳೆದ.
ಕ್ಲಾರ್ಕ್ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಮರಳಿದ ಮೇಲೆ ಅವನ ವಿವಾಹವಾಯಿತು. ಪತ್ನಿ ಮೈರ ಸ್ಮಿತ್. ಆಕೆಯೂ ನ್ಯೂ ಇಂಗ್ಲೆಂಡಿನವಳೇ.

ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಅವನು ಅನೇಕ ಕಾಲೇಜುಗಳಲ್ಲಿ ಬೋಧಿಸಿ ಕೊನೆಗೆ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಕಾಲು ಶತಮಾನಕ್ಕೂ ಹೆಚ್ಚು ಕಾಲ (1895-1923) ಬೋಧಿಸಿದ. 1895-1911ರಲ್ಲಿ ಪೊಲಿಟಿಕಲ್ ಸೈನ್ಸ್ ಕ್ವಾರ್ಟರ್ಲಿ ತ್ರೈಮಾಸಿಕೆಯ ಸಂಪಾದಕನಾಗಿದ್ದ. ದಿ ಫಿಲಾಸಫಿ ಆಫ್ ವೆಲ್ತ್ (1895), ದಿ ಡಿಸ್ಟ್ರಿಬ್ಯೂಷನ್ ಆಫ್ ವೆಲ್ತ್ (1899), ದಿ ಕಂಟ್ರೋಲ್ ಆಫ್ ಟ್ರಸ್ಟ್ಸ್ (1901), ದಿ ಪ್ರಾಬ್ಲೆಮ್ ಆಫ್ ಮನಾಪಲಿ (1904)-ಇವು ಆತನ ಪುಸ್ತಕಗಳಲ್ಲಿ ಮುಖ್ಯವಾದುವು.

ಜರ್ಮನ್ ಇತಿಹಾಸಪಂಥ ಕ್ಲಾರ್ಕನ ಮೇಲೆ ಎರಡು ರೀತಿಯ ಪ್ರಭಾವ ಬೀರಿತು. ಒಂದನೆಯದಾಗಿ ಆ ಪಂಥದ ವಿಶ್ಲೇಷಣ ಸಲಕರಣೆಯಾದ ಸೀಮಾಂತ ಸಿದ್ಧಾಂತದಲ್ಲೂ ಎರಡನೆಯದಾಗಿ ಮೌಲ್ಯಸಿದ್ದಾಂತ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಿಡಿಸುವುದರಲ್ಲೂ ಅವನು ಆಸಕ್ತಿ ವಹಿಸಿದ. ಮೊದಲನೆಯ ಪ್ರಭಾವದಿಂದಾಗಿ ಅವನು ಸೀಮಾಂತ ಉಪಯುಕ್ತತಾ ಸಿದ್ಧಾಂತವನ್ನು ಸ್ವಪ್ರಯತ್ನದಿಂದ ರೂಪಿಸುವುದರಲ್ಲಿ ಯಶಸ್ವಿಯಾದ. ಎರಡನೆಯದರಿಂದಾಗಿ ಅವನು ಸೀಮಾಂತತೆಯ ಸಿದ್ಧಾಂತವನ್ನು ಉತ್ಪಾನೆ ವಿತರಣೆಗಳಿಗೆ ಅನ್ವಯಿಸಿ ಅಲ್ಲಿಯ ಸಮಸ್ಯೆಗಳನ್ನು ಬಿಡಿಸುವ ಪ್ರಯತ್ನ ಮಾಡಿದ. ಇದು ಅರ್ಥ ಮೀಮಾಂಸೆಗೆ ಅವನ ಮೂಲಭೂತ ಕಾಣಿಕೆಯೆನಿಸಿದೆ.

ಜರ್ಮನ್ ಪ್ರಭಾವದಿಂದಾಗಿ ಅವನು ಅಭಿಜಾತ ಅರ್ಥಶಾಸ್ತ್ರವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವುದನ್ನು ಕಲಿತ. ಅವನ ಪ್ರಕಾರ ಅಭಿಜಾತ ಅರ್ಥಶಾಸ್ತ್ರ ಐದು ಆಧಾರ ಪ್ರತಿಜ್ಞೆಗಳಿಂದ ಕೂಡಿದೆ; ಖಾಸಗಿ ಆಸ್ತಿ, ವ್ಯಕ್ತಿ ಸ್ವಾತಂತ್ರ್ಯ, ಆರ್ಥಿಕ ಜೀವನದಲ್ಲಿ ಸರ್ಕಾರ ಕೈಹಾಕದಿರುವುದು, ಬಂಡವಾಳ ಮತ್ತು ಕಾರ್ಮಿಕ ವರ್ಗಗಳಲ್ಲಿ ಗತಿಶೀಲತೆ ಮತ್ತು ಕೆಲವು ಬಯಕೆಗಳನ್ನು ಪೂರೈಸಿಕೊಳ್ಳಬೇಕೆಂಬ ಮಾನವನ ಆಸೆ. ಆದರೆ ಕ್ಲಾರ್ಕನ ದೃಷ್ಟಿಯಲ್ಲಿ ಇಷ್ಟೇ ಆಧಾರ ಪ್ರತಿಜ್ಞೆಗಳು ಸಾಲವು; ಇವಕ್ಕೆ ಇನ್ನು ಮೂರನ್ನು ಸೇರಿಸಬೇಕು. ಒಂದನೆಯದಾಗಿ, ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕವಾಗಿ ನೋಡುವುದು ಸೂಕ್ತವಲ್ಲ; ಸಮಾಜ ಪರಸ್ಪರಾವಲಂಬಿಗಳಾದ ವ್ಯಕ್ತಿಗಳಿಂದ ಕೂಡಿದ್ದು, ಎರಡನೆಯದಾಗಿ, ಸಮಾಜದ ಮೌಲಿಕ ಪ್ರಜ್ಞೆಗೆ ಒಪ್ಪುವಂತಿದ್ದರೆ ಮಾತ್ರ ಆರ್ಥಿಕ ತತ್ತ್ವಗಳು ಸಮಂಜಸವೆನಿಸುತ್ತವೆ. ಮೂರನೆಯದಾಗಿ, ಆರ್ಥಿಕ ವಿಶ್ಲೇಷಣೆಯಲ್ಲಿ ಸ್ಥಿತಿ ಮತ್ತು ಗತಿವಿಜ್ಞಾನಗಳೆಂಬ ಬೇರೆಬೇರೆ ಸಲಕರಣೆಗಳ ಉಪಯೋಗ, ಕೊನೆಯ ಆಧಾರ ಪ್ರತಿಜ್ಞೆ ಅವನಿಗೆ ಲಾಭಸಿದ್ಧಾಂತವನ್ನು ರೂಪಿಸಲು ಉಪಯುಕ್ತವಾದರೆ, ಉಳಿದೆರಡು ಆಧಾರ ಪ್ರತಿಜ್ಞೆಗಳು ವಿತರಣೆಯ ಬಗ್ಗೆ ನ್ಯಾಯಸಮ್ಮತವೆನಿಸಿದ ಸೂತ್ರಗಳನ್ನು ಕಂಡುಹಿಡಿಯಲು ಅವನನ್ನು ಪ್ರೇರೇಪಿಸಿದುವು.

ಕ್ಲಾರ್ಕನ ಅಭಿಪ್ರಾಯದಲ್ಲಿ ಯಾವುದೇ ಸಮಾಜ ನ್ಯಾಯಸಮ್ಮತವೆನಿಸಬೇಕಾದರೆ ಅಲ್ಲಿ ಪದಾರ್ಥಗಳನ್ನು ಸೃಷ್ಟಿಸಲು ಯಾರು ಕಾರಣರೋ ಅವರಿಗೇ ಅವು ಸಿಕ್ಕಬೇಕಾದ್ದು ಧರ್ಮ. ಈ ಸೂತ್ರದ ಆಧಾರದ ಮೇಲೆ ಅವನು ಉತ್ಪನ್ನದಲ್ಲಿ ನ್ಯಾಯಸಮ್ಮತವಾದ ಭಾಗವನ್ನು ಉತ್ಪಾದನಾಂಗಗಳಲ್ಲಿ ಹಂಚಲು ಅನುವಾಗುವಂಥ ಒಂದು ವಿಶ್ಲೇಷಣ ಸಲಕರಣೆಯನ್ನು ರೂಪಿಸುವ ಪ್ರಯತ್ನ ಮಾಡಿದ. ಈ ಪ್ರಯತ್ನದಲ್ಲಿ ಆತ ಯಶಸ್ವಿಯೂ ಆದ. ಉತ್ಪಾದನಾಂಗಗಳ ಸಂಭಾವನೆ ಅವುಗಳ ಸೀಮಾಂತುತ್ಪಾದಕತೆಗೆ ಸಮನಾಗಬೇಕೆಂಬುದು ಅವನ ಅಭಿಪ್ರಾಯ. ಉದಾಹರಣೆಗೆ, ಪ್ರತಿ ಕಾರ್ಮಿಕನ ವೇತನವೂ ಅವನ ಸೀಮಾಂತ ಉತ್ಪಾದಕತೆಗೆ ಸಮನಾಗಿರಬೇಕು. ಉತ್ಪಾದನೆಯಲ್ಲಿ ಇಳಿಮುಖ ಸೀಮಾಂತ ಪ್ರತಿಫಲ ಪ್ರವೃತ್ತಿ ಕಂಡುಬರುವುದರಿಂದ ಕಾರ್ಮಿಕರನ್ನು ಅಧಿಕಾಧಿಕ ಸಂಖ್ಯೆಯಲ್ಲಿ ನೇಮಿಸಿಕೊಂಡಂತೆ ಸೀಮಾಂತುತ್ಪಾದಕತೆ ಕಡಿಮೆಗೊಳ್ಳುತ್ತ ಬಂದು ಕೊನೆಗೆ ಸಮಾಜದಲ್ಲಿ ಪೂರ್ಣ ಉದ್ಯೋಗವನ್ನು ನಿಶ್ಚಿತಪಡಿಸುವಂಥ ಒಂದು ವೇತನಮಟ್ಟ ನಿರ್ಣಯಿಸಲ್ಪಡುತ್ತದೆಯೆಂದು ಕ್ಲಾರ್ಕ್ ಅಭಿಪ್ರಾಯಪಡುತ್ತಾನೆ. ಈ ಮಟ್ಟಕ್ಕಿಂತ ಹೆಚ್ಚಿನ ವೇತನವನ್ನು ಕಾರ್ಮಿಕರು ಬೇಡಿದ ಪಕ್ಷದಲ್ಲಿ ನಿರುದ್ಯೋಗ ಉಂಟಾಗುವ ಸಂಭವವುಂಟು. ಕಾರ್ಮಿಕ ಸಂಘಗಳು ಕಾರ್ಮಿಕರ ಸೀಮಾಂತ ಉತ್ಪಾದಕತೆಗಿಂತ ಮೀರಿದ ವೇತನದರವನ್ನು ಪಡೆಯುವುದು ಸಾಧ್ಯವಿಲ್ಲವೆಂದು ಕ್ಲಾರ್ಕ್ ಸ್ಥಾಪಿಸಲು ಯತ್ನಿಸಿದ್ದಾನೆ. ಇದು ಸೀಮಾಂತ ಉತ್ಪಾದಕತಾ ವೇತನ ಸಿದ್ಧಾಂತ. ಈಗಲೂ ಇದು ವಿಶೇಷವಾಗಿ ಬಳಕೆಯಲ್ಲಿದೆ. ಆದರೆ ಇದು ಕಾರ್ಮಿಕರ ಬೇಡಿಕೆಯನ್ನು ನಿರ್ಣಯಿಸುವ ಅಂಶವನ್ನು ಮಾತ್ರ ಒತ್ತಿಹೇಳುತ್ತದೆಯೇ ಹೊರತು, ಕಾರ್ಮಿಕರ ಸರಬರಾಯಿಯನ್ನು ನಿಶ್ಚಯಿಸುವ ಅಂಶಗಳ ಬಗ್ಗೆ ಬೆಳಕು ಚೆಲ್ಲುವುದಿಲ್ಲವಾದ್ದರಿಂದ ಇದು ವೇತನ ನಿರ್ಣಯದ ಬಗ್ಗೆ ಪೂರ್ಣ ವಿವರ ನೀಡುವುದರಲ್ಲಿ ಸಮರ್ಥವಾಗುವುದಿಲ್ಲವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಿದ್ಧಾಂತಕ್ಕೆ ಪೂರ್ಣರೂಪ ನೀಡುವ ದೃಷ್ಟಿಯಿಂದ ಇತರ ಅರ್ಥಶಾಸ್ತ್ರಜ್ಞರು ಕಾರ್ಮಿಕರ ಸರಬರಾಯಿಯನ್ನು ನಿರ್ಣಯಿಸುವ ಅಂಶಗಳ ಬಗ್ಗೆ ಅಧ್ಯಯನ ಮಾಡಿ, ಕಾರ್ಮಿಕರ ಬೇಡಿಕೆ ಮತ್ತು ಸರಬರಾಯಿಗಳನ್ನು ನಿರ್ಣಯಿಸುವ ಅಂಶಗಳ ಆಧಾರದ ಮೇಲೆ ವೇತನದ ನಿರ್ಧಾರವಾಗುತ್ತದೆಯೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಬಡ್ಡಿದರದ ನಿರ್ಣಯದ ಬಗ್ಗೆಯೂ ಕ್ಲಾರ್ಕನ ಅಭಿಪ್ರಾಯ ಇದೇ ಬಗೆಯದು. ವೇತನದಂತೆಯೇ ಬಡ್ಡಿದರವೂ ಬಂಡವಾಳದ ಸೀಮಾಂತ ಉತ್ಪಾದಕತೆಯ ಆಧಾರದ ಮೇಲೆ ನಿರ್ಣಯಿಸಲ್ಪಡುತ್ತದೆ. ಇಲ್ಲಿಯೂ ಅವನು ಬಂಡವಾಳಕ್ಕಿರುವ ಬೇಡಿಕೆಯನ್ನು ನಿರ್ಧರಿಸುವ ಅಂಶವನ್ನು ಮಾತ್ರ ಗಮನಿಸಿದ್ದಾನೆಯೇ ಹೊರತು ಬಂಡವಾಳದ ಸರಬರಾಯಿಯನ್ನು ನಿರ್ಧರಿಸುವ ಅಂಶಗಳನ್ನು ಉಪೇಕ್ಷಿಸಿದ್ದಾನೆ.

ಕ್ಲಾರ್ಕ್‍ನ ಲಾಭ ಹಾಗೂ ಗೇಣಿ ಸಿದ್ಧಾಂತಗಳು ಸ್ಥಿತಿ ಮತ್ತು ಗತಿ ಆರ್ಥಿಕತೆಗಳ ಬಗ್ಗೆ ಅವನು ನೀಡಿರುವ ವ್ಯಾಖ್ಯೆಗಳಿಗೆ ಅನುಗುಣವಾಗಿವೆ. ಸ್ಥಿತಿ ಮತ್ತು ಗತಿ ಆರ್ಥಿಕತೆಗಳ ನಡುವೆ ಅವನು ಸೂಚಿಸಿರುವ ವ್ಯತ್ಯಾಸ, ಅರ್ಥಶಾಸ್ತ್ರದ ಅಧ್ಯಯನ ಕ್ರಮಕ್ಕೆ ನೀಡಿರುವ ಒಂದು ಅಮೂಲ್ಯ ಕಾಣಿಕೆ ಎಂದು ಪರಿಗಣಿತವಾಗಿದೆ. ಆರ್ಥಿಕತೆಯಲ್ಲಿ ಯಾವ ಬಗೆಯ ಬದಲಾವಣೆಯೂ ಇಲ್ಲದಿರುವುದು ಸ್ಥಿತಿಆರ್ಥಿಕತೆಯ ಪರಿಸ್ಥಿತಿಯನ್ನು ಸೂಚಿಸುತ್ತದೆ. ಆದರೆ ಗತಿಆರ್ಥಿಕತೆಯಲ್ಲಿ ಐದು ಬಗೆಯ ಗತ್ಯಾತ್ಮಕ ಬದಲಾವಣೆಗಳು ಕಂಡುಬರುತ್ತವೆ: 1.ಜನಸಂಖ್ಯೆಯ ಬೆಳೆವಣಿಗೆ, 2.ಬಂಡವಾಳದ ಬೆಳೆವಣಿಗೆ, 3.ತಾಂತ್ರಿಕ ಪ್ರಗತಿ, 4.ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬದಲಾವಣೆ, 5.ಅನುಭೋಗಿಗಳ ಬಯಕೆಗಳಲ್ಲಿ ಬದಲಾವಣೆ-ಇವೇ ಆ ಬದಲಾವಣೆಗಳು. ಇವುಗಳ ಪ್ರಭಾವವೇನೆಂಬುದನ್ನು ಅವನು ವಿಶ್ಲೇಷಿಸಿದ್ದಾನೆ. ನಿಗಮನಚೌಕಟ್ಟಿನಲ್ಲಿ ಅನುಗಮನ ಗತಿಶಾಸ್ತ್ರವನ್ನು ಹೊಂದಿಸಲು ಯತ್ನಿಸಿದ್ದು ಕ್ಲಾರ್ಕ್‍ನ ವೈಶಿಷ್ಟ್ಯ. ಅವನ ಪ್ರಕಾರ ಸ್ಥಿತಿ ಆರ್ಥಿಕತೆಯಲ್ಲಿ ಲಾಭದ ಪ್ರಶ್ನೆಯೇ ಬರುವುದಿಲ್ಲ. ಇಲ್ಲಿ ಸಾಮಾನ್ಯವಾದ ಉತ್ಪಾದನಾಂಗಗಳ ಸಂಭಾವನೆಯಗಳೆಂದರೆ ವೇತನ ಮತ್ತು ಬಡ್ಡಿ ಮಾತ್ರ. ಗೇಣಿಯೆಂಬುದು ಉತ್ಪಾದನಾಂಗಗಳಲ್ಲಿ ಅವುಗಳ ವಿರಳತೆಯ ಕಾರಣದಿಂದಾಗಿ ಉಂಟಾಗುವ ಹೆಚ್ಚಳ ಸಂಭಾವನೆಯಷ್ಟೆ. ಆದರೆ ಗತಿ ಆರ್ಥಿಕತೆಯಲ್ಲಿ ಲಾಭ ಮೂಡಿ ಬರುವುದು ಸ್ವಾಭಾವಿಕ. ಹೀಗೆ ಸ್ಥಿತಿ ಆರ್ಥಿಕತೆಯಲ್ಲಿ ಸಂಘಟಕ ಕೇವಲ ಉಸ್ತುವಾರಿ ಕಾರ್ಯವನ್ನು ನಿರ್ವಹಿಸಿ ತನ್ನ ಶ್ರಮಕ್ಕೆ ತಕ್ಕ ವೇತನ ಪಡೆಯುತ್ತಾನೆಯೇ ಹೊರತು ಲಾಭವನ್ನಲ್ಲ. ಆದರೆ ಆರ್ಥಿಕತೆಯಲ್ಲಿ ಬದಲಾವಣೆಗಳುಂಟಾದಾಗ ಸಂಘಟಕ ಹೊಸ ಸಮಸ್ಯೆಗಳನ್ನು ಎದುರಿಸಬೇಕು. ಇಲ್ಲಿ ಶ್ರಮ, ಬಂಡವಾಳ ಮತ್ತಿತರ ಉತ್ಪಾದನಾಂಗಗಳನ್ನು ಸಂಯೋಜಿಸಿ ಉತ್ಪಾದನೆಯ ಗತಿಯನ್ನು ಬದಲಾದ ಸ್ಥಿತಿಗೆ ಅಳವಡಿಸಿಕೊಂಡು ಉತ್ಪಾದನಾಕಾರ್ಯ ಕೈಗೊಳ್ಳಬೇಕು. ಸಂಘಟಕನಿಗೆ ಈ ಕಾರ್ಯಕ್ಕಾಗಿ ಲಭ್ಯವಾಗುವ ಸಂಭಾವನೆಯೇ ಲಾಭ. ಆದ್ದರಿಂದ ಕ್ಲಾರ್ಕ್‍ನ ದೃಷ್ಟಿಯಲ್ಲಿ ಲಾಭವೆಂಬುದು ಬದಲಾವಣೆಗಳ ಕಾರಣದಿಂದಾಗಿ ಮೂಡಿ ಬರುವಂಥ ಅಂಶ.

ಕ್ಲಾರ್ಕನ ಅನಂತರ ಬಂದ ಅರ್ಥಶಾಸ್ತ್ರಜ್ಞರು-ಮುಖ್ಯವಾಗಿ ಫ್ರಾಂಕ್ ಎಚ್.ನೈಟ್-ಅವನ ಈ ವಾದವನ್ನು ಒಪ್ಪಿಕೊಂಡರಾದರೂ ಲಾಭ ಆರ್ಥಿಕತೆಯಲ್ಲುಂಟಾಗುವ ಎಲ್ಲ ಬದಲಾವಣೆಗಳನ್ನು ನಿರ್ವಹಿಸುವ ಕಾರ್ಯಕ್ಕಾಗಿ ಸಂಘಟಕನಿಗೆ ಕೊಡುವ ಸಂಭಾವನೆಯಲ್ಲವೆಂದೂ ಅದು ಅನಿಶ್ಚಿತ ಬದಲಾವಣೆಗಳನ್ನು ನಿರ್ವಹಿಸುವ ಕಾರ್ಯಕ್ಕಾಗಿ ಪಡೆಯುವ ಸಂಭಾವನೆ ಎಂದೂ ಭಾವಿಸಲಾಗಿದೆ.

ತಾನು ವಿಶ್ಲೇಷಿಸಿರುವ ನಿಯಮಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಮಾತ್ರ ಅನ್ವಯವಾಗುವುದೆಂಬುದನ್ನು ಕ್ಲಾರ್ಕ್ ತನ್ನ ಎಸೆನ್ಷಿಯಲ್ಸ್ ಆಫ್ ಎಕಾನಾಮಿಕ್ ಥಿಯೊರಿ ಎಂಬ ಪುಸ್ತಕದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ.

ಕ್ಲಾರ್ಕನಿಗೆ ಜೀವನದಲ್ಲಿ ವಿಶೇಷವಾದ ಶ್ರದ್ಧೆ ಇತ್ತು. ಅವನು ಕೊನೆಯವರೆಗೂ ಆಶಾವಾದಿಯಾಗಿದ್ದ. ವಿಶ್ವಶಾಂತಿಸಾಧನೆಯಲ್ಲಿ ಅವನಿಗೆ ವಿಶೇಷವಾದ ಆಸಕ್ತಿಯಿತ್ತು. 1935ರಲ್ಲಿ ಈ ಬಗ್ಗೆ ಅವನು ಒಂದು ಪುಸ್ತಕ ಬರೆದ (ಎ ಟೆಂಡರ್ ಫಾರ್ ಪೀಸ್). ಕ್ಲಾರ್ಕ್ ತನ್ನ 91ನೆಯ ವಯಸ್ಸಿನಲ್ಲಿ, ಎರಡನೆಯ ಮಹಾಯುದ್ಧ ಆರಂಭವಾಗಲು ಒಂದು ವರ್ಷ ಮುಂಚೆ (1938), ತೀರಿಕೊಂಡ. 												 (ಎ.ಬಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ